|
Home » About Us |
|
|
ಸಂಘದ ಹುಟ್ಟು
|
|
|
ರಾಷ್ಟ್ರದ ರಾಜಧಾನಿಯ ಹೃದಯ ಭಾಗದಲ್ಲಿ ಅಂದರೆ ನವದೆಹಲಿಯ ರಾಮಕೃಷ್ಣ ಪುರಂನ ಸೆಕ್ಟರ್ ೧೨ರ ಮೋತಿಭಾಗ್‌ನ ಬಳಿ ನೀವು ಬಂದರೆ ಅಲ್ಲಿ ಭವ್ಯವಾದ, ಕನ್ನಡಿಗರ ಘನತೆಯೇ ಮೂರ್ತಿವೆತ್ತಂತೆ ಕಂಡು ಬರುವ ಅಪೂರ್ವವಾದ ಸಾಂಸ್ಕೃತಿಕ ಸಮುಚ್ಚಯವನ್ನು ಕಣ್ಣಾರೆ ನೋಡಬಹುದು. ದೆಹಲಿ ಕರ್ನಾಟಕ ಸಂಘದ ಈ ಕಟ್ಟಡವು ಸ್ವಾತಂತ್ರ್ಯ ಪೂರ್ವದಲ್ಲೇ ಕರ್ನಾಟಕದಿಂದ ವಲಸೆ ಬಂದು ನೆಲೆ ನಿಂತ ಕನ್ನಡಿಗರ ಬಗೆಗೆ, ಉದ್ಯೋಗ ನಿಮಿತ್ತ ಹೀಗೆ ಬಂದು ಕೆಲವು ವರ್ಷಗಳನ್ನು ಕಳೆದು ಕನ್ನಡದ ಕಂಪನ್ನು ಹರಡಿ ಮತ್ತೆ ತಾಯ್ನಾಡಿಗೆ ತೆರಳಿದ ಕನ್ನಡಿಗರ ಕುರಿತು ಮಾತ್ರವಲ್ಲದೆ ಹಲವು ದಶಕಗಳ ಕಾಲ ದೆಹಲಿಯಲ್ಲೇ ವಾಸಿಸಿ ಇಲ್ಲಿನ ಬಹು ಸಂಸ್ಕೃತಿಯೊಂದಿಗೆ, ಬಹು ಭಾಷೆಗಳನ್ನಾಡುವ ಜನರೊಂದಿಗೆ ಕಲೆತು ಅವರೊಂದಿಗೆ ತಾವೂ ಒಬ್ಬರಾಗಿ ತನ್ನತನವನ್ನು ಕಳೆದುಕೊಳ್ಳದೆ ಮೂಲ ಸಂಸ್ಕೃತಿಯನ್ನು ಕಾಪಾಡಿಕೊಂಡು ಅಭಿವೃದ್ಧಿಪಡಿಸುತ್ತಾ, ಕನ್ನಡಕ್ಕಾಗಿ ಟೊಂಕ ಕಟ್ಟಿ ನಿಂತ ಕನ್ನಡಿಗರ ಕತೆಯನ್ನು ಹೇಳುತ್ತದೆ.
ಬೆರಳೆಣಿಕೆಯ ಕನ್ನಡಿಗರು ಒಂದೆಡೆ ಸೇರಿ ೧೯೪೮ರಲ್ಲಿ ದೆಹಲಿಯಲ್ಲಿ ಆರಂಭಿಸಿದ ಪುಟ್ಟ ಸಂಘವೊಂದು ಇದೀಗ ನಾಡು, ಹೊರನಾಡು ಹಾಗೂ ವಿದೇಶಗಳಲ್ಲಿ ಸಾವಿರಾರು ಮಂದಿ ಆಜೀವ ಸದಸ್ಯರನ್ನು ಮತ್ತು ನಾಡಿನ ಪ್ರಮುಖ ಗಣ್ಯರನ್ನು ಗೌರವ ಸದಸ್ಯರನ್ನಾಗಿ ಹೊಂದಿ ಬೃಹದಾಕಾರವಾಗಿ ಬೆಳೆದಿದೆ. ದೆಹಲಿ ಕರ್ನಾಟಕ ಸಂಘವು ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘಟನೆ ಎಂದು ಅಧಿಕೃತವಾಗಿ ನೋಂದಣೆ ಆಗುವ ಮೊದಲು ಅದರ ಎಲ್ಲ ಚಟುವಟಿಕೆಗಳು ಇಲ್ಲಿನ ಕನ್ನಡಿಗರ ಮನೆಗಳಲ್ಲೇ ಜರಗುತ್ತಿದ್ದವು.
ರಾಜಧಾನಿಯ ವಿವಿದೆಡೆ ಚದುರಿ ಹೋಗಿರುವ ಕನ್ನಡಿಗರನ್ನು ಒಂದೆಡೆ ಕಲೆ ಹಾಕಿ ಆ ಮೂಲಕ ರಾಜ್ಯದ ವೈವಿಧ್ಯಮಯ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮತ್ತು ರಾಜ್ಯದಿಂದ ಬರುವ ಪ್ರತಿಭೆಗಳಿಗೆ ರಾಷ್ಟ್ರ ಮಟ್ಟದಲ್ಲಿ ಮಿಂಚಲು ಸೂಕ್ತ ವೇದಿಕೆ ಅಗತ್ಯ. ದೆಹಲಿ ಕರ್ನಾಟಕ ಸಂಘ ಈ ಉದ್ದೇಶವನ್ನು ಮನಗಂಡು ದೆಹಲಿಯಲ್ಲಿ ಸೂಕ್ತ ನಿವೇಶನ ಮತ್ತು ತನ್ನದೇ ಆದ ಕಟ್ಟಡವನ್ನು ಹೊಂದಲು ಬಯಸಿತು. ಇದು ಸಾಧ್ಯವಾಗಿದ್ದು ೧೯೫೩ರಲ್ಲಿ. ಅಂದು ಕೇಂದ್ರ ಸಚಿವರಾಗಿದ್ದ ಕೆ.ಸಿ. ರೆಡ್ಡಿಯವರ ಮುತುವರ್ಜಿಯಿಂದ ಸಂಘಕ್ಕೆ ಲೋಧಿ ಎಸ್ಟೇಟ್‌ನಲ್ಲಿ ಜಾಗವೊಂದು ಮಂಜೂರಾಯಿತು. ಅದೇ ವರ್ಷ ಸಂಘ ಅಧಿಕೃತವಾಗಿ ನೋಂದಾವಣೆಗೊಂಡಿತು.
ಮಹಿಷಿಯವರ ಕೊಡುಗೆ
ಸಂಘ ಮತ್ತು ಶಾಲೆ ಒಂದೇ ಕಡೆ ಕಾರ್ಯ ನಿರ್ವಹಿಸುವಲ್ಲಿ ಸರಕಾರದಿಂದ ಸೂಕ್ತ ಅನುದಾನ, ಸಾರ್ವಜನಿಕರಿಂದ ಸಹಾಯ ಧನ ಇತ್ಯಾದಿಗಳನ್ನು ಪಡೆಯಲು ಸಂಘ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ಸವಲತ್ತನ್ನು ಪಡೆಯಲು ದೆಹಲಿ ಕರ್ನಾಟಕ ಸಂಘಕ್ಕೆ ತನ್ನದೇ ಆದ ಒಂದು ಪ್ರತ್ಯೇಕ ನಿವೇಶನದ ಅಗತ್ಯವಿತ್ತು. ಸಂಘ ಸ್ವಂತ ಜಾಗಕ್ಕಾಗಿ ಎದುರು ನೋಡುತ್ತಿದ್ದಾಗ ಪ್ರಸ್ತುತ ಕಟ್ಟಡ ತಲೆ ಎತ್ತಿರುವ ಆರ್.ಕೆ. ಪುರಂನಲ್ಲಿ ನಿವೇಶನವನ್ನು ಒದಗಿಸಿಕೊಡುವಲ್ಲಿ ಡಾ. ಸರೋಜಿನಿ ಮಹಿಷಿ ಅವರ ಕೊಡುಗೆ ಅನುಪಮವಾದುದು. ಕೇಂದ್ರ ಸಚಿವರಾಗಿದ್ದ ಮಹಿಷಿ ಅವರ ನಿವಾಸವೇ ಅದುವರೆಗೆ ದೆಹಲಿ ಕನ್ನಡಿಗರ ಕನ್ನಡ ಚಟುವಟಿಕೆಯ ತಾಣವಾಗಿತ್ತು. ಅವರ ಸಮರ್ಥ ನಾಯಕತ್ವದಲ್ಲಿ ಸಂಘದ ವಿಭಿನ್ನ ಕಾರ್ಯಕ್ರಮಗಳಿಗಾಗಿ ಕಟ್ಟಡವೊಂದು ರಚನೆಯಾಗಿ ರಾಜಧಾನಿಯಲ್ಲಿ ಕನ್ನಡಿಗರು ಒಂದೆಡೆ ಪರಸ್ಪರ ಬೆರೆತು ನಲಿದು ಇಲ್ಲಿ ಕನ್ನಡದ ಕಂಪು ಪಸರಿಸಲು ಆರಂಭವಾಯಿತು.
ನೂತನ ಸಮುಚ್ಚಯದ ಹುಟ್ಟು ಮತ್ತು
ಬೆಳವಣಿಗೆ
ದೆಹಲಿ ಕರ್ನಾಟಕ ಸಂಘ ಹಲವಾರು ವರ್ಷಗಳಿಂದ ತನ್ನದೇ ಆದ ಸಭಾಂಗಣವನ್ನು ಹೊಂದಬೇಕೆಂದು ಹಂಬಲಿಸಿತು. ಇದು ಸಮಸ್ತ ದೆಹಲಿ ಕನ್ನಡಿಗರ ಮಾತ್ರವಲ್ಲ ರಾಜ್ಯದಿಂದ ಬರುವ ಪ್ರತಿಭೆಗಳ ಇಚ್ಛೆಯೂ ಆಗಿತ್ತು. ಕಾರಣ ಸಂಘದ ಆಶ್ರಯದಿಂದ ನಡೆಯುವ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಅದು ತಮಿಳರ ಇಲ್ಲವೇ ತೆಲುಗು ಇನ್ನಿತರ ಅನ್ಯ ಭಾಷೆಗಳ ಜನರು ನಿರ್ಮಿಸಿದ ಅಡಿಟೋರಿಯಂಗಳಲ್ಲಿ ಬಾಡಿಗೆ ಹಣ ತೆತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗಿತ್ತು. ಆರ್.ಕೆ. ಪುರಂನಲ್ಲಿ ಸಂಘ ಅದಾಗಲೇ ಹೊಂದಿದ್ದ ಸ್ವಂತ ಕಟ್ಟಡದ ಬಳಿ ಇನ್ನಷ್ಟು ಖಾಲಿ ಜಾಗವಿದ್ದರೂ ಅಲ್ಲಿ ಒಂದು ಪ್ರತ್ಯೇಕ ಸಭಾಂಗಣವಿಲ್ಲದೆ ಸಂಘದ ಮೂಲ ಉದ್ದೇಶವೇ ಸಾಕಾರವಾಗಲು ತೊಡಕಾಗಿತ್ತು. ಒಂದು ಉತ್ತಮ ಸಭಾಂಗಣವಿರುವ ವಿವಿದೋದ್ದೇಶದ ಬೃಹತ್ ಸಮುಚ್ಚಯವನ್ನು ಕಟ್ಟಬೇಕೆಂಬ ಕನಸು ಮೊಳಕೆ ಒಡೆದಿದ್ದು ೧೯೯೪-೯೬ರ ಸುಮಾರಿಗೆ. ಈ ಅವಧಿಯಲ್ಲಿ ಶ್ರೀ ಐ. ರಾಮಮೋಹನ ರಾವ್ ಅವರು ಅಧ್ಯಕ್ಷರಾಗಿ ಹಾಗೂ ಶ್ರೀ ಎಸ್.ಜಿ. ಹೆಗಡೆಯವರು ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಒಂದು ಹಂತದಲ್ಲಿ ವಿವಿದೋದ್ದೇಶಿತ ಸಾಂಸ್ಕೃತಿಕ ಸಮುಚ್ಚಯದ ನಿರ್ಮಾಣಕ್ಕಾಗಿ ಒರ್ವ ವಾಸ್ತುಶಿಲ್ಪಿಗಳ ನೇಮಕವೂ ಆಯಿತು. ಆದರೆ ಈ ಕಾರ್ಯಕಾರಿ ಸಮಿತಿಯ ಅವಧಿ ಪೂರ್ಣಗೊಂಡ ಕಾರಣ ನೂತನ ಸಮಿತಿ ಅಸ್ತಿತ್ವಕ್ಕೆ ಬಂತು.
ಶ್ರೀ ಕೆ.ಆರ್. ನಾಗರಾಜ ಅವರು ೧೯೯೭ರಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡ ನಂತರ ಹೊಸ ಕಟ್ಟಡವನ್ನು ಕಟ್ಟುವ ನಿರ್ಧಾರ ಇನ್ನಷ್ಟು ಬಲಗೊಂಡು ದಿನಾಂಕ ೨೩.೦೪.೨೦೦೩ರಂದು ಕೇಂದ್ರ ನಗರಾಭಿವೃದ್ಧಿ ಖಾತೆಯ ಸಚಿವ ಶ್ರೀ ಅನಂತಕುಮಾರ್ ಅವರಿಂದ ನೂತನ ಸಾಂಸ್ಕೃತಿಕ ಸಮುಚ್ಚಯದ ಶಂಕುಸ್ಥಾಪನೆಯನ್ನು ನೆರವೇರಿಸಿತು. ಈ ನಡುವೆ ಸಂಘ ಅನೇಕ ಏಳು ಬೀಳುಗಳನ್ನು ಕಂಡಿತು.
ಈಡೇರಿದ ಹೆಬ್ಬಯಕೆ
ಆರಂಭದಲ್ಲಿ ಕಟ್ಟಡ ಕಟ್ಟಲು ತಗಲುವ ವೆಚ್ಚದ ಅಂದಾಜು ಸುಮಾರು ೪.೫ಕೋಟಿ ಆಗಿತ್ತು. ಆದರೆ ಕ್ರಮೇಣ ವೆಚ್ಚದ ಅಂದಾಜು ಇನ್ನೂ ೨ಕೋಟಿಯಷ್ಟು ವಿಸ್ತರಿಸಿತ್ತು. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಂಘದ ಚುಕ್ಕಾಣಿ ಹಿಡಿದವರು ಸಾಹಿತಿ ಡಾ. ಪುರುಷೋತ್ತಮ ಬಿಳಿಮಲೆಯವರು. ಬಿಳಿಮಲೆಯವರು ಅಮೇರಿಕಾದ ಭಾರತೀಯ ಅಧ್ಯಯನ ಸಂಸ್ಥೆಯಲ್ಲಿ ನಿರ್ದೇಶಕರಾಗಿ ನೇಮಕಗೊಂಡು ಕೆಲವು ವರ್ಷಗಳ ಹಿಂದೆ ದೆಹಲಿಗೆ ಆಗಮಿಸಿದರು. ಸಂಘದ ಹೊಸ ಕಟ್ಟಡವನ್ನು ಈ ಎಲ್ಲಾ ಸಮಸ್ಯೆಗಳ ನಡುವೆ ಬಿಳಿಮಲೆ ನೇತೃತ್ವದ ಹೊಸ ಕಾರ್ಯಕಾರಿ ಸಮಿತಿ ನಿಗದಿತ ಅವಧಿಗೆ ಮುನ್ನವೇ ನಿರ್ಮಿಸಿದಲ್ಲದೇ ಕನ್ನಡದ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಅನನ್ಯತೆ ಬತ್ತಿ ಹೋಗದಂತೆ ಅನೇಕ ಕಾರ್ಯಕ್ರಮಗಳನ್ನು ಸಂಘದಲ್ಲಿ ನಿರಂತರವಾಗಿ ಜರಗಿಸಿತು.
ಈ ಅವಧಿಯಲ್ಲಿ ಸಾಂಸ್ಕೃತಿಕ ಸಮುಚ್ಚಯ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು ಶ್ರೀ ಐ.ರಾಮಮೋಹನ ರಾವ್ ಅವರು. ಭಾರತ ಸರಕಾರದ ಪ್ರಧಾನ ವಾರ್ತಾಧಿಕಾರಿಗಳಾಗಿ ಹಾಗೂ ದೇಶದ ಐವರು ಪ್ರಧಾನ ಮಂತ್ರಿಗಳ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದ ರಾಯರ ಮಾರ್ಗದರ್ಶನ, ಸಲಹೆ ಈ ಸಂದರ್ಭದಲ್ಲಿ ಸಂಘಕ್ಕೆ ದೊರಕಿದ್ದು ಒಂದು ಸುಯೋಗ. ಡಾ. ಬಿಳಿಮಲೆ, ಶ್ರೀ ರಾವ್ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ಸರವು ಕೃಷ್ಣ ಭಟ್ ಅವರ ಮುಂದಾಳತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಆರ್ಥಿಕ ನೆರವು, ಸಾರ್ವಜನಿಕರಿಂದ ಮತ್ತು ಉದ್ದಿಮೆಗಳಿಂದ ಧನ ಸಂಗ್ರಹ, ಬ್ಯಾಂಕುಗಳಿಂದ ಸಾಲ ಸೌಲಭ್ಯವನ್ನು ಪಡೆದುಕೊಂಡು ನೂತನ ಸಾಂಸ್ಕೃತಿಕ ಸಮುಚ್ಚಯ ದಿನಾಂಕ ೧೬.೦೪.೨೦೦೫ರಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಶ್ರೀ ಧರಮ್‌ಸಿಂಗ್ ಅವರಿಂದ ನೂತನ ಕಟ್ಟಡ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಮಾಜಿ ಪ್ರಧಾನಿ ಶ್ರೀ ಎಚ್.ಡಿ. ದೇವೇಗೌಡ, ಮಾಜಿ ಉಪಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಇವರು ಈ ಐತಿಹಾಸಿಕ ಕ್ಷಣಗಳಲ್ಲಿ ಭಾಗಿಯಾಗಿದ್ದರು.
ಸಾಹಿತ್ಯ- ಸಂಸ್ಕೃತಿಗಳ ಆಶ್ರಯ ತಾಣ
ಐವತ್ತರ ದಶಕದಲ್ಲೇ ಟಿ.ಪಿ. ಕೈಲಾಸಂ ಅವರ ನಾಟಕಗಳು ದೆಹಲಿ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆಯುತ್ತಿದ್ದವು. ಮುಖ್ಯವಾಗಿ ನಾಟಕ ಪ್ರದರ್ಶನ ಮತ್ತು ರಂಗ ಚಟುವಟಿಕೆಗಳಲ್ಲಿ ದೆಹಲಿ ಕನ್ನಡಿಗರು ತೋರಿದ ಆಸಕ್ತಿ ಹಾಗೂ ಕೊಡುಗೆಗಳು ಆಧುನಿಕ ಕನ್ನಡ ಸಾಂಸ್ಕೃತಿಕ ಇತಿಹಾಸದಲ್ಲಿ ಒಂದು ದಾಖಲೆ. ಇಲ್ಲಿ ಸ್ಥಾಪನೆಗೊಂಡ 'ಕನ್ನಡ ಭಾರತಿ' ಸಂಸ್ಥೆ ದೆಹಲಿಯ ಸಾಂಸ್ಕೃತಿಕ ವಾತಾವರಣ ಮತ್ತು ಕನ್ನಡ ಪ್ರಜ್ಞೆಯನ್ನು ಬಹುಕಾಲ ಜಾಗೃತಗೊಳಿಸಿತ್ತು. ರಾಜಧಾನಿಯ ರಂಗ ಚಟುವಟಿಕೆಗಳಿಗೆ ಶ್ರೀ ಎಂ.ವಿ. ನಾರಾಯಣ ರಾವ್, ಶ್ರೀ ಎಂ.ಎಸ್. ಸತ್ಯು, ಶ್ರೀ ಯು. ಪ್ರಭಾಕರ್ ರಾವ್, ಶ್ರೀ ಎಚ್.ಎಸ್. ಕುಲಕರ್ಣಿ ಮೊದಲಾದವರ ದೇಣಿಗೆ ಅಪಾರ. ಇನ್ನು ಸಂಗೀತ ನೃತ್ಯಗಳಿಗೆ ಇಲ್ಲಿ ಸದಾ ಆಶ್ರಯ ನೀಡಲಾಗಿದೆ. ಪ್ರಮುಖ ವಿಚಾರಸಂಕಿರಣಗಳಲ್ಲಿ, ಕನ್ನಡಿಗರಲ್ಲದೆ ಅನ್ಯ ಭಾಷೆಗಳ ಹೆಸರಾಂತ ಸಾಹಿತಿಗಳಾದ ಅಮೃತಾ ಪ್ರೀತಂ, ಕುಶ್ವಂತ್ ಸಿಂಗ್ ಮೊದಲಾದವರು ಭಾಗವಹಿಸಿದ್ದಾರೆ. ಕಲಾವಿದ ಮಾಸ್ಟರ್ ಹಿರಣ್ಣಯ್ಯ, ವರನಟ ಡಾ. ರಾಜ್‌ಕುಮಾರ್ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿ ದೆಹಲಿ ಕನ್ನಡಿಗರನ್ನು ರಂಜಿಸಿದ್ದಾರೆ. ಮಾಜಿ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿ, ಮಾಜಿ ರಾಷ್ಟ್ರಪತಿ ಶಂಕರದಯಾಳ ಶರ್ಮ, ಬಿ.ಡಿ. ಜತ್ತಿ ಮೊದಲಾದವರು ಸಂಘಕ್ಕೆ ಭೇಟಿ ಇತ್ತ ಉದಾಹರಣೆಗಳಿವೆ.
ಸಂಘದ
ಮುಖವಾಣಿ 'ಅಭಿಮತ'
ಮೊದಲ ಬಾರಿಗೆ ಸಂಘ ೧೯೯೦ರಲ್ಲಿ ಹೊರತಂದ 'ಅಭಿಮತ' ಮಾಸಪತ್ರಿಕೆ ತದನಂತರ ನಿರಂತರವಾಗಿ ಪ್ರಕಟವಾಗುತ್ತಲೇ ಸಂಘದ ಮುಖವಾಣಿಯಾಗಿ ಬೆಳೆದಿದೆ. ಇದೀಗ 'ಅಭಿಮತ' ಸಂಘದ ಚಟುವಟಿಕೆಗಳ ವರದಿಯಷ್ಟೇಯಲ್ಲ ಅನೇಕ ಸೃಜನಶೀಲ ಬರಹಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಆರಂಭದಲ್ಲಿ ಎಂಟು ಪುಟಗಳಿಗೆ ಮೀಸಲಾಗಿದ್ದ ಪತ್ರಿಕೆ ಈಗ ಮೂವತ್ತೆರಡು ಪುಟಗಳಿಗೆ ವಿಸ್ತರಿಸಿದೆ. 'ಅಭಿಮತ'ದ ಆರಂಭ ಮತ್ತು ಅದರ ಮುದ್ರಣ ಹಾಗೂ ವಿತರಣೆಗೆ ಆಗಿನ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ವಿ. ಗೋಪಿನಾಥ್ ಅವರು ವಿಶೇಷವಾಗಿ ಶ್ರಮಿಸಿದ್ದಾರೆ. ಈ ಪತ್ರಿಕೆಯ ಬೆಳವಣಿಗೆಯಲ್ಲಿ ಡಾ. ವೆಂಕಟಾಚಲ ಹೆಗಡೆ, ಡಾ. ಸತ್ಯನಾಥ್, ಶ್ರೀ ಬಿ.ಎಸ್. ಚಂದ್ರಶೇಖರ್, ಡಾ. ಪುರುಷೋತ್ತಮ ಬಿಳಿಮಲೆ, ಶ್ರೀ ವಸಂತ ಶೆಟ್ಟಿ ಬೆಳ್ಳಾರೆ, ಡಾ. ಅಹಲ್ಯಾ ಚಿಂತಾಮಣಿ ಮೊದಲಾದವರು ದುಡಿದಿದ್ದಾರೆ. ಒಮ್ಮೆ ಪ್ರಸಿದ್ಧ ಕವಿ ಚೆನ್ನವೀರ ಕಣವಿಯವರು ಧಾರವಾಡದಿಂದ ಬರೆಯುತ್ತಾ 'ಹೊರನಾಡ ಕನ್ನಡಿಗರ ಬದುಕಿನ ಸೃಜನಾತ್ಮಕ ಪ್ರತಿಕ್ರಿಯೆಗಳನ್ನು ಬರಹಗಳ ಮೂಲಕ ಮೂಡಿಸಲು ಪ್ರಚೋದಿಸುತ್ತಿರುವುದು ನಿಜಕ್ಕೂ ಅಭಿನಂದನೀಯ' ಎಂದಿದ್ದಾರೆ. ಅದರಂತೆ ಡಾ. ಹಾ.ಮಾ. ನಾಯಕ್, ನಾಡೋಜ ಕೈಯಾರ ಕಿಂಞ್ಞಣ್ಣ ರೈ ಮೊದಲಾದವರು ಅಭಿಮತದಲ್ಲಿ ಬರುವ ವಿಚಾರಗಳನ್ನು, ವಿನ್ಯಾಸಗಳನ್ನು ಮೆಚ್ಚಿಕೊಂಡು ಸಂಘಕ್ಕೆ ಪತ್ರ ಬರೆದಿದ್ದಾರೆ.
ನೂತನ ಸಮುಚ್ಚಯ ಉದ್ಘಾಟನೆಗೊಂಡಾಗ ಅಭಿಮತದ ವಿಶೇಷ ಸ್ಮರಣ ಸಂಚಿಕೆ ಹೊರತರಲಾಗಿತ್ತು. ೩೨೦ಪುಟಗಳ ಈ ಸಂಚಿಕೆಯಲ್ಲಿ ಹೊರನಾಡ ಕನ್ನಡಿಗರ ಬಗೆಗೆ, ಕನ್ನಡದ ಬಗೆಗೆ ವೈವಿಧ್ಯಮಯ ವಿಷಯಗಳು ಅಡಕವಾಗಿದ್ದು ಇದು ಸಂಘದ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಒಂದು ದಾಖಲೆ. 'ಅಭಿಮತ' ಮುಂದಿನ ದಿನಗಳಲ್ಲಿ ಒಂದು ಮುಕ್ತ ಸಾಹಿತ್ಯಿಕ ಸಂವಾದಕ್ಕೆ ಎಡೆಮಾಡಿಕೊಡುವ ಕನ್ನಡದ ಪ್ರಮುಖ ಪತ್ರಿಕೆಯಾಗುವಲ್ಲಿ ಮುನ್ನಡಿ ಇಟ್ಟಿದೆ.
ಇನ್‌ಫೋಸಿಸ್
ಫೌಂಡೇಶನ್ ಗ್ರಂಥಾಲಯ
ಸಂಘದ ಗ್ರಂಥಾಲಯದಲ್ಲಿ ಅತ್ಯಮೂಲ್ಯ ಪುಸ್ತಕಗಳಿವೆ. ಪಂಪಭಾರತ, ಗದಾಯುದ್ಧ, ಕರ್ನಾಟಕ ಭಾರತ ಕಥಾ ಮಂಜರಿ, ಶೂನ್ಯ ಸಂಪಾದನೆ, ದಾಸರ ಪದಗಳಂಥ ಹಳಗನ್ನಡ-ನಡುಗನ್ನಡ ಪಠ್ಯಗಳಿವೆ. ಆಧುನಿಕ ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳಿವೆ. ಆಧುನಿಕ ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳಾದ ಕಾದಂಬರಿ, ಕವಿತೆ, ನಾಟಕ, ಪ್ರಬಂಧ, ವಿಮರ್ಶೆ, ಜೀವನ ಚರಿತ್ರೆ, ಅಭಿನಂದನ ಗ್ರಂಥ ಸಂಪುಟಗಳು, ಸಮಗ್ರಕೃತಿಗಳು. ವಿಶ್ವಕೋಶಗಳೆಲ್ಲಾ ಗ್ರಂಥ ಭಂಡಾರದಲ್ಲಿವೆ. ಆದರೆ ಪುಸ್ತಕಗಳನ್ನು ವೈಜ್ಞಾನಿಕವಾಗಿ ಪೂರ್ತಿಯಾಗಿ ವಿಂಗಡಿಸಿಲ್ಲ. ಈಗ ಹೊಸ ಜಾಗವೊಂದರಲ್ಲಿ ಪುಸ್ತಕಗಳನ್ನು ವೈಜ್ಞಾನಿಕವಾಗಿ ಜೋಡಿಸುವ, ಸಂರಕ್ಷಿಸುವ, ಓದುಗರಿಗೆ ಒದಗಿಸಿ ಕೊಡುವ ಕೆಲಸವನ್ನು ಇನ್ನಷ್ಟೇ ಮಾಡಬೇಕಾಗಿದೆ. ಸುದೈವಕ್ಕೆ ಕಳೆದ ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನ ಇನ್‌ಫೋಸಿಸ್ ಫೌಂಡೇಶನ್‌ನ ವತಿಯಿಂದ ಶ್ರೀಮತಿ ಸುಧಾ ಮೂರ್ತಿಯವರು ಸಂಘದ ಗ್ರಂಥಾಲಯಕ್ಕೆ ೧೦ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಸಧ್ಯದಲ್ಲೇ ಇನ್‌ಫೋಸಿಸ್ ಫೌಂಡೇಶನ್ ಗ್ರಂಥಾಲಯ ಸಂಘದ ತಳಮನೆಯಲ್ಲಿ ಆಧುನಿಕ ರೀತಿಯಲ್ಲಿ ಕಾರ್ಯಾರಂಭ ಮಾಡಲಿದೆ.
ಅತಿಥಿ ಸತ್ಕಾರ
ಕರ್ನಾಟಕ ಸಂಘವು ಒಪ್ಪಂದದ ಮೇರೆಗೆ ನಡೆಸುತ್ತಿರುವ ಕರ್ನಾಟಕ ಫುಡ್ ಸೆಂಟರ್ ರಾಜಧಾನಿಯ ಅನ್ಯ ಭಾಷಿಕ ಜನರನ್ನು ಸಂಘದೆಡೆಗೆ ಸೆಳೆಯುವ ಪ್ರಮುಖ ತಾಣವಾಗಿದೆ. ಒಂದೊಮ್ಮೆ ಇತರ ರಾಜ್ಯಗಳ ಜನರು ಕನ್ನಡಿಗರನ್ನು, ಕರ್ನಾಟಕ ಸಂಘವನ್ನು ಈ ಕ್ಯಾಂಟೀನ್ ಮೂಲಕ ಗುರುತಿಸಿದರೆ ಅಚ್ಚರಿ ಇಲ್ಲ.
ಸಂಘದ ಅತಿಥಿ ಗೃಹದಲ್ಲಿ ಏಳು ಹವಾನಿಯಂತ್ರಿತ ಕೊಠಡಿಗಳಿವೆ. ಒಂದು ಹಾಲ್ ಇರುವ ಅತಿಥಿ ಗೃಹ ಕರ್ನಾಟಕದಿಂದ ಬರುವ ಕನ್ನಡಿಗರಿಗೆ ಆಶ್ರಯ ನೀಡುವಲ್ಲಿ ಸದಾ ನೆರವಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲೇ ಇರುವುದರಿಂದ ಅನೇಕ ಪ್ರವಾಸಿಗರಿಗೆ ಪ್ರಯಾಣಿಕರಿಗೆ ಉಳಕೊಳ್ಳಲು ಅನುಕೂಲಕರವಾಗಿದೆ. ಕಡಿಮೆ ದರದಲ್ಲಿ ವಸತಿ ಸೌಲಭ್ಯ ದೊರೆಯುವುದರಿಂದಾಗಿ ಈಗ ದೆಹಲಿ ಆಗಮಿಸುವ ಕನ್ನಡಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ವಿಭಿನ್ನ ಚಟುವಟಿಕೆಗಳು
ದೆಹಲಿ ಕರ್ನಾಟಕ ಸಂಘವು ಬರಿಯ ಮನರಂಜನೆ, ಸಾಹಿತ್ಯ ಗೋಷ್ಠಿ, ಅಥವಾ ಹೊರಗಿನಿಂದ ಬಂದ ಕನ್ನಡಿಗರಿಗೆ ವಸತಿ ಸೌಲಭ್ಯವನ್ನು ಒದಗಿಸುವ ಕೆಲಸವನ್ನಷ್ಟೇ ಮಾಡುತ್ತಿಲ್ಲ. ಇಲ್ಲಿ ಸಾಮಾಜಿಕ ಕಳಕಳಿಯ ಹತ್ತು ಹಲವು ಕಾರ್ಯಕ್ರಮಗಳು ಜರಗುತ್ತಿವೆ. ಉಚಿತ ವೈದ್ಯಕೀಯ ತಪಾಸಣೆ, ಸಂಗೀತ ತರಬೇತಿ, ಯೋಗ ತರಬೇತಿ, ಐ.ಎ.ಎಸ್. ಅಭ್ಯರ್ಥಿಗಳ ತರಬೇತಿಗೆ ಸ್ಥಳಾವಕಾಶ, ಅರ್ಹ ಮತ್ತು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಕನ್ನಡ ಕಲಿಕೆ, ಉಚಿತ ಕಾನೂನು ಸಲಹೆ ಇತ್ಯಾದಿ ಜನಪರ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಇವಲ್ಲದೆ ಕಲಾವಿದರಿಗೆ, ಸ್ಥಳೀಯ ಪ್ರತಿಭೆಗಳಿಗೆ ಹಾಗೂ ಬರಹಗಾರರಿಗೆ ಪ್ರೋತ್ಸಾಹ ನೀಡಲು ಏಕಾಂಕ ನಾಟಕ ಸ್ಪರ್ಧೆ, ವಿಶಿಷ್ಟ ಕನ್ನಡಿಗ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ ಮೊದಲಾದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.
ದೆಹಲಿ ಕರ್ನಾಟಕ ಸಂಘವು ಕರ್ನಾಟಕದ ಹಾಗೂ ಕನ್ನಡದ ಸಮಗ್ರ ಅಭಿವೃದ್ಧಿಗೆ ಹಿತಚಿಂತನೆ ನಡೆಸುವ ಜವಾಬ್ದಾರಿಯೊಂದಿಗೆ ರಾಜಧಾನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಮಹತ್ವದ ವೇದಿಕೆಯಾಗಬೇಕೆಂದು ಈಗಿನ ಅಧ್ಯಕ್ಷ ಡಾ. ಬಿಳಿಮಲೆ ಅವರು ಉತ್ಕಟ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆ ದಿಸೆಯಲ್ಲಿ ದೆಹಲಿ ಕರ್ನಾಟಕ ಸಂಘ ರಾಷ್ಟ್ರದ ರಾಜಧಾನಿಯಲ್ಲಿ ಕನ್ನಡಿಗರ ಅಭಿವೃದ್ಧಿಗೆ ಪಣತೊಟ್ಟ ಕರ್ನಾಟಕವನ್ನು ಸಮರ್ಥವಾಗಿ ಪ್ರತಿನಿಧಿಸುವ ಸಾಂಸ್ಕೃತಿಕ ರಾಯಭಾರಿಯಾಗಿ ಹೊರಹೊಮ್ಮುತ್ತಿದೆ.
ಧಾರವಾಡದ ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ನ 'ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ'ಯನ್ನು ಈ ವರ್ಷ ದೆಹಲಿಯ ಕರ್ನಾಟಕ ಸಂಘಕ್ಕೆ ನೀಡಲಾಗಿದೆ. ಒಂದು ವರ್ಷ ಸಾಹಿತಿಗೆ, ಒಂದು ವರ್ಷ ಕನ್ನಡ ಸಂಘಕ್ಕೆ ಕೊಡುವ ಈ ಪ್ರಶಸ್ತಿಯ ಮೊತ್ತವನ್ನು ಈ ವರ್ಷದಿಂದ ೨೫,೦೦೦/- ರೂ. ಬದಲಾಗಿ ೫೦,೦೦೦/- ರೂ. ಗೆ ಹೆಚ್ಚಿಸಲಾಗಿದೆ. ಇಲ್ಲಿಯವರೆಗೆ ಕರ್ನಾಟಕದ ಒಳಗಿನ ಸಂಘಗಳಿಗೆ ಕೊಡುತ್ತಿದ್ದ ಈ ಪ್ರಶಸ್ತಿಯನ್ನು ಹೊರಗಡೆ ನೀಡಿದ್ದರಿಂದ ಪ್ರಶಸ್ತಿಗೆ ರಾಷ್ಟ್ರೀಯ ವ್ಯಾಪ್ತಿ ಪ್ರಾಪ್ತವಾದಂತಾಗಿದೆ. ೨೦೦೮ರ ಜನವರಿ ೩೧ರಂದು ನಡೆಯಲಿರುವ ಬೇಂದ್ರೆಯವರ ಜನ್ಮದಿನೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು.
ತೀರ ಈಚೆಗೆ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ, ದೆಹಲಿಯ ರಾಜ್ಯಪಾಲ ತೇಜಿಂದರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಭೀಷ್ಮನಾಗಿ ಹಾಗೂ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಕೌರವನಾಗಿ ವೇಷ ಹಾಕಿ ಕುಣಿದಿದ್ದು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಮಹತ್ವದ ಸಾಹಿತಿಗಳಾದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ, ಗೀತಾ ನಾಗಭೂಷಣ, ಬಿ.ಎ. ವಿವೇಕ ರೈ, ಎಚ್.ಎಸ್. ಶಿವಪ್ರಕಾಶ್ ಮೊದಲಾದವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ವಿವಿಧ ಅಕಾಡೆಮಿಗಳು ಇಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನೀಡಿವೆ. ಅಷ್ಟೇ ಏಕೆ ಕರಾವಳಿಯ ಪ್ರಸಿದ್ಧ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಈ ವೇದಿಕೆಯಲ್ಲಿ ಹಾಡಲು ಶುರು ಹಚ್ಚಿದ ಹಿಂದಿ ಯಕ್ಷಗಾನದ ಹಾಡುಗಳು ಇದೀಗ ದೇಶದ ಉದ್ದಗಲದಲ್ಲೂ ಕೇಳಿಸಿಕೊಂಡಿದೆ. ಇವೆಲ್ಲದಕ್ಕೂ ಸಾಕ್ಷಿಯಾಗಿರುವುದು ದೆಹಲಿ ಕರ್ನಾಟಕ ಸಂಘ. ಆದ್ದರಿಂದಲೇ ಕಳೆದ ಕೆಲವು ವರ್ಷಗಳಿಂದ ಸಾಹಿತ್ಯ ಸಂಸ್ಕೃತಿಗೆ ಅನನ್ಯ ಸೇವೆ ಸಲ್ಲಿಸುತ್ತಿರುವ ದೆಹಲಿ ಕರ್ನಾಟಕ ಸಂಘಕ್ಕೆ ಈ ಬಾರಿಯ 'ಅಂಬಿಕಾತನಯದತ್ತ' ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಐವತ್ತರ ದಶಕದಲ್ಲಿ ರಾಷ್ಟ್ರದ ರಾಜಧಾನಿಯಲ್ಲಿ ಕನ್ನಡಿಗರನ್ನು ಕಲೆಹಾಕುವ ಹೊಣೆಯೊಂದಿಗೆ ಜನಿಸಿಕೊಂಡ ದೆಹಲಿ ಕರ್ನಾಟಕ ಸಂಘ ಸುಮಾರು ಮೂರು ವರ್ಷಗಳ ಹಿಂದೆ ತನ್ನದೇ ಆದ ಸಾಂಸ್ಕೃತಿಕ ಸಮುಚ್ಛಯವನ್ನು ನಿರ್ಮಿಸಿಕೊಳ್ಳುವವರೆಗೆ ಸಾಗಿ ಬಂದ ಹಾದಿ ಹೊರನಾಡ ಕನ್ನಡಿಗರು ಮಾತ್ರವಲ್ಲ ಸಮಸ್ತ ಕನ್ನಡಿಗರ ಇಚ್ಛಾಶಕ್ತಿ ಹಾಗೂ ಸಾಂಸ್ಕೃತಿಕ ಪ್ರಜ್ಞೆಗೆ ಮಾದರಿಯಾಗಿ ನಮ್ಮ ಮುಂದಿದೆ.
ವಿವಿಧೋದ್ದೇಶಗಳ ಸಾಂಸ್ಕೃತಿಕ ಸಮುಚ್ಛಯವನ್ನು ಕಟ್ಟುವ ಬಹುದಿನಗಳ ದೆಹಲಿ ಕನ್ನಡಿಗರ ಕನಸು ನನಸಾಗುವ ಹಂತದಲ್ಲಿ ಒಂದೆಡೆ ಅಪಾರ ಸಾಲ ಹಾಗೂ ಇನ್ನೊಂದೆಡೆ ನಿಗದಿತ ವೇಳೆಯಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಮಹತ್ತರ ಜವಾಬ್ದಾರಿ ಇತ್ತು. ಆಗ ಸಂಘದ ಚುಕ್ಕಾಣಿವಹಿಸಿಕೊಂಡವರು ಕನ್ನಡದ ಮಹತ್ವದ ವಿಮರ್ಶಕ, ಸಾಹಿತಿ ಡಾ. ಪುರುಷೋತ್ತಮ ಬಿಳಿಮಲೆಯವರು. ಭವ್ಯ ಸಾಂಸ್ಕೃತಿಕ ಸಮುಚ್ಛಯದ ನಿರ್ಮಾಣದ ಜೊತೆ ಜೊತೆಗೆ ಇತರೆಲ್ಲ ಭಾಷಾ ಬಾಂಧವರಿಗೆ ಮಾದರಿಯಾಗುವಂತೆ ಮಾತ್ರವಲ್ಲ ನಾಡಿನ ಯಾವುದೇ ಸಂಸ್ಥೆಯೊಂದು ನಡೆಸಲಾಗದ ಹತ್ತು ಹಲವಾರು ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದರಿಂದಲೇ ಸಂಘಕ್ಕೆ ಮೇರು ಸಾಹಿತಿ ದ.ರಾ. ಬೇಂದ್ರೆ ಹೆಸರಿನ ಮಹತ್ವದ ಪುರಸ್ಕಾರ ಲಭಿಸಿದ್ದು ಅರ್ಥಪೂರ್ಣವಾಗಿದೆ.
ರಾಜಧಾನಿಯಲ್ಲಿ ಕರ್ನಾಟಕ, ಮಹಿಳೆ ಮತ್ತು ಕನ್ನಡ ಸಾಹಿತ್ಯ, ದಕ್ಷಿಣ ಭಾರತದ ಮೌಖಿಕ ಪರಂಪರೆ, ಭಾರತದ ಸಾಮಾಜಿಕ ನ್ಯಾಯ ಪರಂಪರೆಗೆ ಕರ್ನಾಟಕದ ಕೊಡುಗೆ ಮೊದಲಾದ ಗಂಭೀರ ಚರ್ಚೆಗಳು ನಡೆದಿರುವುದು ಬಿಳಿಮಲೆಯವರು ಈ ಸಂಘದ ಸಾರಥ್ಯ ವಹಿಸಿಕೊಂಡ ಮೇಲೆ. 'ದಿ ವೀಕ್' ಸಂಪಾದಕ ಸಚ್ಚಿದಾನಂದ ಮೂರ್ತಿ ಸೇರಿದಂತೆ ಪ್ರಮುಖರು ದೆಹಲಿಯಲ್ಲಿ ಕರ್ನಾಟಕದ ಅಸ್ತಿತ್ವವನ್ನು ಕುರಿತು ಚರ್ಚಿಸಿದ 'ರಾಜಧಾನಿಯಲ್ಲಿ ಕರ್ನಾಟಕ' ಕೃತಿಯನ್ನು ಸಂಘ ಈಗಾಗಲೇ ಪ್ರಕಟಿಸಿ ಹೊರತಂದಿದೆ. ಕಳೆದೊಂದು ವರ್ಷದಲ್ಲಿ ಕನ್ನಡಿಗರು 'ಸುವರ್ಣ ಕರ್ನಾಟಕ' ವರ್ಷವನ್ನು ಆಚರಿಸಿದ ಹಿನ್ನೆಲೆಯಲ್ಲಿ ಸಂಘದ ಮುಖಪತ್ರಿಕೆ 'ಅಭಿಮತ' ತಾನೂ ಉತ್ಸಾಹದಲ್ಲಿ ಪಾಲ್ಗೊಂಡು ಕರ್ನಾಟಕ ನಾಡು-ನುಡಿಯ ಕುರಿತ ವಿಶೇಷ ಸಂಚಿಕೆಗಳನ್ನು ಹೊರತಂದಿದೆ. ಈ ಸಂಘದ ವಿಚಾರ ಮಂಟಪದಲ್ಲಿ ಸಮಕಾಲೀನ ಸಾಹಿತ್ಯ ಹಾಗೂ ಸಾಮಾಜಿಕ ವಿಷಯಗಳನ್ನು ಪ್ರತಿ ತಿಂಗಳು ವಿವಿಧ ಗೋಷ್ಠಿ ಸಂವಾದ ರೂಪದಲ್ಲಿ ಚರ್ಚಿಸಲಾಗುತ್ತಿದ್ದು ಕನ್ನಡ ಪ್ರಜ್ಞೆಯನ್ನು ರಾಜಧಾನಿಯಲ್ಲಿ ಸದಾ ಕಾಲ ಜಾಗೃತಗೊಳಿಸುವ ಪ್ರಮಾಣಿಕ ಕೆಲಸ ನಡೆಯುತ್ತಿದೆ.
|
|
|
|
|
|
|
|
|
|
DKS e-
Abhimata
|
|
|
|
|
|
DKS -
Committee
|
|
|
|
|
|
|
|
Send us a Message
|
|
|
|